“ಸಕಲ ಸಂಸ್ಕೃತಿ”ಯ ಚೈತನ್ಯ – ಯುಗಾದಿ ಸಂಭ್ರಮಕ್ಕೆ ಸ್ಪೂರ್ತಿ ತುಂಬುವ ವ್ಯಕ್ತಿ ಪರಿಚಯ
“ಜನನೀ ಜನ್ಮಭೂಮಿಶ್ಚ ಸ್ವರ್ಗಾದಪೀ ಗರೀಯಸಿ” ಎನ್ನುವ ಮಾತಿನಂತೆ ನಮ್ಮ ದೇಶದ ಸಂಸ್ಕೃತಿಯ ಬಗ್ಗೆ, ನಮ್ಮ ನೆಲದ ಸಂಸ್ಕಾರದ ಬಗ್ಗೆ ಅಪಾರವಾದ ಕಾಳಜಿಯನ್ನು ಹೊಂದಿ, ಅದನ್ನು ಪಸರಿಸುವ ಕಾರ್ಯವನ್ನೂ ಮಾಡುತ್ತಿರುವ “ಸಕಲ ಸಂಸ್ಕೃತಿ” ಸಂಸ್ಥೆಯ ಸಂಸ್ಥಾಪಕ ನಿರ್ದೇಶಕಿ ಮತ್ತು ಶಿಕ್ಷಕಿ ಶ್ರೀಮತಿ ಶ್ರೀಕಲಾ ಡಿ.ಎಸ್. ಅವರದ್ದು ಬಹುಮುಖೀ ಪ್ರತಿಭೆ. ಹೆಸರಿಗೆ ತಕ್ಕಂತೆ ಸಕಲ ಕಲಾ ವಲ್ಲಭೆ! ಎಲ್ಲ ಹೆಣ್ಣುಮಕ್ಕಳಿಗೂ ಶ್ರೀಕಲಾ ಅವರ ಸ್ಪೂರ್ತಿ ತುಂಬುವ ಚಟುವಟಿಕೆಗಳು ಪ್ರೇರಣೆಯಾಗಲಿ ಎನ್ನುವ ಕಾರಣಕ್ಕೆ ಇವರ ಸಾಧನೆಗಳನ್ನು ನಿಮ್ಮೆಲ್ಲರ ಮುಂದೆ ಪ್ರಸ್ತುತ ಪಡಿಸುತ್ತಿದ್ದೇನೆ.
ಇವರು ಸಾಹಿತ್ಯ, ದೂರದರ್ಶನ, ಕಲೆ, ಪತ್ರಿಕೋದ್ಯಮ ಮತ್ತು ಸಾಂಸ್ಕೃತಿಕ ಶಿಕ್ಷಣವನ್ನು ಸಮನ್ವಯಗೊಳಿಸುವಂತಹ ಸೃಜನಶೀಲ ವೃತ್ತಿಪರರು. ಲೇಖಕಿ, ಕನ್ನಡ ದೂರದರ್ಶನ ಧಾರವಾಹಿಗಳ ಸಂಭಾಷಣೆ ಬರಹಗಾರ್ತಿ, ಕಟೆಂಟ್ ಕ್ರಿಯೇಟರ್, ಅಂಕಣ ಬರಹಗಾರ್ತಿ, ನಿರೂಪಕಿ, ಕಥೆಗಾರ್ತಿ, ಭರತನಾಟ್ಯ ಕಲಾವಿದೆ ಮತ್ತು ವಾಯ್ಸ್ ಓವರ್ ಆರ್ಟಿಸ್ಟ್. ಅಬ್ಬಾ ಅದೆಷ್ಟು ರೀತಿಯ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ!
“ಅಮ್ಮನ ಡೈರಿ” ಯೂಟ್ಯೂಬ್ ಚಾನೆಲ್ ಮೂಲಕ ಎಲ್ಲರ ಮೆಚ್ಚುಗೆ ಗಳಿಸಿರುವ ಇವರು ಮಕ್ಕಳನ್ನು ಶಾಂತ ರೀತಿಯಲ್ಲಿ, ಆಧ್ಯಾತ್ಮಿಕವಾಗಿ, ಸೃಜನಾತ್ಮಕವಾಗಿ ಬೆಳೆಸುವ ಕುರಿತು ಪೋಷಕರಿಗೆ ಸರಳ ರೀತಿಯಲ್ಲಿ ಮಾರ್ಗದರ್ಶನವನ್ನು ನೀಡುತ್ತ ಬಂದಿರುವುದು ಗಮನಾರ್ಹ.
“ಅಮ್ಮನ ಕಥೆ”, “ರಾಮಾಯಣ ಕಥನ”ದಂತಹ ಅದ್ಬುತವಾದ ಆನ್ಲೈನ್ ಮತ್ತು ಆಫ್ಲೈನ್ ಕಾರ್ಯಕ್ರಮಗಳ ಮೂಲಕ ಮಕ್ಕಳ ಮತ್ತು ಪಾಲಕರ ಮನ ಮುಟ್ಟುತ್ತಿರುವುದು ವಿಶೇಷ. ಡಿಜಿಟಲ್ ಯುಗವನ್ನು ನಮ್ಮ ಸಂಸ್ಕೃತಿಯನ್ನು ಬೆಳೆಸುವುದಕ್ಕೆ ಏಣಿಯಾಗಿ ಬಳಸಿಕೊಳ್ಳುತ್ತಿರುವುದು ಅನುಕರಣೀಯ. ಅನಿಮೇಷನ್, ಎಐ ಯುಗದ ಹಾವಳಿಯಲ್ಲಿ ಕಳೆದುಹೋಗುತ್ತಿರುವ ನಮ್ಮ ಮತ್ತು ಮಕ್ಕಳ ಸೃಜನಶೀಲತೆಯನ್ನು ಇವರ ಕಥಾ ವಾಚನ ಚುರುಕುಗೊಳಿಸುವುದು ಮತ್ತು ಗಮನವನ್ನ ಹಿಡಿದಿಡುವುದಂತೂ ಖಂಡಿತ. ಮೂಲ ರಾಮಾಯಣ ಯಾವುದು ಎನ್ನುವುದೇ ಗೊತ್ತಾಗದಷ್ಟು ಅನಿಮೇಟಡ್ ಕಥಾ ಲೋಕದಲ್ಲಿ ಇವರು ಮೂಲ ಕಥೆಯನ್ನು ಮುಂದಿನ ಪೀಳಿಗೆಗೂ ತಲುಪಿಸುತ್ತಿರೋದು ಶ್ಲಾಘನೀಯ. ಇವೆಲ್ಲಾ ಕೇವಲ ಒಂದು ದಿನದ ಕಾರ್ಯಕ್ರಮಗಳಲ್ಲ. ಮಕ್ಕಳ ಉಜ್ವಲ ಭವಿಷ್ಯಕ್ಕೆ ಭದ್ರವಾದ ಅಡಿಪಾಯ.
ತಮ್ಮ ಸ್ನೇಹಿತೆ ಮಂದಸ್ಮಿತಾ ಭಟ್ ಜೊತೆ ಸೇರಿ ಶ್ರೀಕಲಾ ಅವರು ಹುಟ್ಟುಹಾಕಿರುವ ‘ಸಕಲ ಸಂಸ್ಕೃತಿʼ ಸಂಸ್ಥೆಯಲ್ಲಿ ಭಾರತೀಯ ಜ್ಞಾನ ಪರಂಪರೆ ಮತ್ತು ಕಲೆಗಳ ಮೂಲಕ ಮಕ್ಕಳ ಸಮಗ್ರ ವ್ಯಕ್ತಿತ್ವದ ನಿರ್ಮಾಣಕ್ಕೆ ವಿಶೇಷ ಗಮನ ಕೊಡಲಾಗುತ್ತಿದೆ. ಇಲ್ಲಿ ಮಕ್ಕಳು ವಿಮರ್ಶಾತ್ಮಕವಾಗಿ ಯೋಚಿಸುವ ಸಾಮರ್ಥ್ಯವಷ್ಟೇ ಅಲ್ಲದೆ ಸೃಜನಶೀಲತೆ ಮತ್ತು ಜೀವನದ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುವ ಶಕ್ತಿಯನ್ನೂ ಬೆಳೆಸಿಕೊಳ್ಳುತ್ತಾರೆ.
ಮಕ್ಕಳಿಗೆ ತರಬೇತಿ ನೀಡಲಾಗುವ ವಿಷಯಗಳು:
• ಶ್ಲೋಕ ಪಠಣ
• ರಂಗಭೂಮಿ
• ಯೋಗ ಮತ್ತು ಪ್ರಾಣಾಯಾಮ
• ಭಾರತೀಯ ಜ್ಞಾನ ಪರಂಪರೆಯ ತರಗತಿಗಳು
• ನೃತ್ಯ, ಸಂಗೀತ, ಕಲೆ
• ಭಾಷಣ ಕಲೆ
ಈ ತರಗತಿಗಳಲ್ಲಿ ಪೌರಾಣಿಕ ಕಥೆಗಳನ್ನು ಮಕ್ಕಳಿಗೆ ಹೇಳುವ ಮೂಲಕ ಮಕ್ಕಳ ಕಲ್ಪನಾ ಶಕ್ತಿಯನ್ನು ಬಲಗೊಳಿಸುವ ಜೊತೆಗೆ ನಮ್ಮ ಭಾರತೀಯ ಇತಿಹಾಸವನ್ನು ಅರಿಯುವ ಅವಕಾಶ ಮಾಡಲಾಗಿದೆ. ಯುವ ಪೀಳಿಗೆಗೆ ಸಂಸ್ಕಾರಗಳ ಮಹತ್ವವನ್ನು ತಿಳಿಸುವ ಉಪನ್ಯಾಸಗಳನ್ನು ನೀಡಿದ್ದು, ಮಕ್ಕಳಿಗಾಗಿ ಅನೇಕ ಕಥಾ ಕಮ್ಮಟಗಳನ್ನು ನಡೆಸಿದ್ದಾರೆ.
ಇವೆಲ್ಲವುಗಳ ಮಧ್ಯೆಯೇ ಶ್ರೀಕಲಾ ಅವರು ಪ್ರಸ್ತುತ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ “ಕರ್ಣ” ಎಂಬ ಅತ್ಯಂತ ಜನಪ್ರಿಯ ಕನ್ನಡ ಧಾರಾವಾಹಿಗೆ ಸಂಭಾಷಣೆ ಬರಹಗಾರ್ತಿಯಾಗಿದ್ದಾರೆ. ಅವರು ‘ಧರ್ಮ ಭಾರತಿʼ ಮಾಸಪತ್ರಿಕೆಗೆ ನಿಯಮಿತವಾಗಿ ‘ಕಥಾ ಮಂಜೂಷ’ ಎಂಬ ಅಂಕಣಗಳನ್ನು ಬರೆಯುತ್ತಾರೆ. ಇಲ್ಲಿ ಅವರು ಮೂಲ ಪುರಾಣಗಳ ಕಥೆಗಳನ್ನು ಆಧುನಿಕ ಓದುಗರಿಗೆ ಸುಲಭವಾಗಿ ಅರ್ಥವಾಗುವಂತೆ ನಿರೂಪಿಸುತ್ತಿದ್ದಾರೆ.
ಲೇಖಕಿಯಾಗಿ ಶ್ರೀಕಲಾ ಅವರು ‘ಬಾಳಂತಿ ಪುರಾಣ’ ಎಂಬ ಪುಸ್ತಕವನ್ನು ರಚಿಸಿದ್ದಾರೆ. ಹೆರಿಗೆ ನಂತರದ ತಾಯಿಯ ಅನುಭವಗಳನ್ನು ಸಂವೇದನಾತ್ಮಕವಾಗಿ ದಾಖಲಿಸಿದ್ದಾರೆ. ಮಕ್ಕಳ ಆರೈಕೆ, ಪೋಷಕರ ಜವಾಬ್ದಾರಿಗಳು, ಮೌಲ್ಯಾಧಾರಿತ ಶಿಕ್ಷಣ ಇವೆಲ್ಲವುಗಳ ಕುರಿತಾಗಿ ಅವರು `ನ್ಯೂಸ್ ಹನಿ’ ವೆಬ್‌ಸೈಟ್‌ನಲ್ಲಿ ಅಂಕಣಗಳನ್ನು ಬರೆಯುವ ಜೊತೆಗೆ ಕರ್ನಾಟಕದ ಅನೇಕ ಪ್ರಮುಖ ಪತ್ರಿಕೆಗಳಿಗೆ ಲೇಖನಗಳನ್ನು ನೀಡಿದ್ದಾರೆ.
“ಹನಿ ಹನಿಗೂಡಿ ಹಳ್ಳ, ತೆನೆ ತೆನೆಗೂಡಿ ಬಳ್ಳ” ಅನ್ನುವ ಗಾದೆಯಂತೆ ಇವರ ಸಾಧನೆಗಳು ಒಂದು, ಎರಡು ವರ್ಷಗಳದ್ದಲ್ಲ ಇದರ ಹಿಂದೆ ಸಾಕಷ್ಟು ಪರಿಶ್ರಮವಿದೆ.
ಪತ್ರಕರ್ತೆಯಾಗಿ ‘ದ ಸಂಡೆ ಇಂಡಿಯನ್’ ಸುದ್ದಿ ಪತ್ರಿಕೆಯಲ್ಲಿ ಕಾರ್ಯವನ್ನು ಆರಂಭಿಸಿದ ಶ್ರೀಕಲಾ ಮುಂದೆ ‘ಕನ್ನಡ ಪ್ರಭ’ ಪತ್ರಿಕೆಯಲ್ಲಿ ವರದಿಗಾರಳಾಗಿ ಮಾಧ್ಯಮ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರು ನಂತರ ‘ಸುದಿನ ಸುರಭಿ’ ಎಂಬ ಕನ್ನಡ ಮಾಸಪತ್ರಿಕೆಯ ಸಂಪಾದಕತ್ವ ವಹಿಸಿದ್ದು ಮತ್ತೊಂದು ಹೆಗ್ಗಳಿಕೆ.
ಅವರ ಬರವಣಿಗೆಯ ಆಸಕ್ತಿ ಕರ್ನಾಟಕದ ಪ್ರಮುಖ ಪತ್ರಿಕೆಗಳಲ್ಲಿ ನೂರಕ್ಕೂ ಹೆಚ್ಚು ಪ್ರಕಟಿತ ಲೇಖನಗಳಿಗೆ ಕಾರಣವಾಗಿದೆ. ಹಲವು ವರ್ಷಗಳಿಂದ ಅವರು ಅನೇಕ ಪ್ರಶಂಸಿತ ಕನ್ನಡ ಧಾರಾವಾಹಿಗಳಿಗೆ ಸಂಭಾಷಣೆ ಬರಹಗಾರ್ತಿಯಾಗಿ ಸೇವೆ ಸಲ್ಲಿಸಿದ್ದಾರೆ. ಉದಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದ ‘ಅರಮನೆ’, ಸ್ಟಾರ್ ಸುವರ್ಣ ವಾಹಿನಿಯ ‘ಎಡೆಯೂರು ಶ್ರೀ ಸಿದ್ಧಲಿಂಗೇಶ್ವರ’ ಇತ್ಯಾದಿ ಧಾರಾವಾಹಿಗಳಿಗೆ ಸಂಭಾಷಣೆ ಬರೆದಿದ್ದಾರೆ.
ಅವರು ಗ್ರೀನ್ ಪಾತ್ ಸಂಸ್ಥೆಯ ‘ಸಾವಯವ ಚಳವಳಿ’ಯ ಭಾಗವಾಗಿ ನಡೆಯುವ ‘ಆರ್ಗ್ಯಾನಿಕ್ ಸಂತೆ’ಯ ಸಂಘಟಕಿಯಾಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ಶ್ರೀಕಲಾ ಡಿ.ಎಸ್. ಅವರು ಭರತನಾಟ್ಯ ನೃತ್ಯದಲ್ಲಿ ಕಲಾಕ್ಷೇತ್ರ ಶೈಲಿಯಲ್ಲಿ ತರಬೇತಿ ಪಡೆದ ನುರಿತ ಕಲಾವಿದೆಯಾಗಿದ್ದು, ಅನೇಕ ಪ್ರತಿಷ್ಠಿತ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪ್ರದರ್ಶನ ನೀಡಿದ್ದಾರೆ. ನಿರಂತರ ಯೋಗಾಭ್ಯಾಸಿ ಆಗಿರುವ ಅವರು ಮಕ್ಕಳಿಗೆ ಯೋಗ ಮತ್ತು ಶ್ಲೋಕಗಳನ್ನು ಬೋಧಿಸಿ ದೇಹ ಮತ್ತು ಆತ್ಮದ ಸಮಗ್ರ ಬೆಳವಣಿಗೆಗೆ ಸಹಕರಿಸುತ್ತಿದ್ದಾರೆ. ಜೊತೆಗೆ ಕಾರ್ಯಕ್ರಮ ನಿರೂಪಣೆಯಲ್ಲೂ ಎತ್ತಿದ ಕೈ. ತಮ್ಮ ಸ್ಪಷ್ಟ ಕನ್ನಡ ಮಾತಿನ ಮೂಲಕ ಇಲ್ಲಿಯ ತನಕ ನೂರಕ್ಕೂ ಹೆಚ್ಚಿನ ಕಾರ್ಯಕ್ರಮಗಳಿಗೆ ನಿರೂಪಣೆ ಮಾಡಿದ ಹೆಗ್ಗಳಿಕೆ ಇವರದ್ದು!
ಶ್ರೀಕಲಾ ಅವರು ಮಾಸ್ ಕಮ್ಯುನಿಕೇಶನ್ ಮತ್ತು ಜರ್ನಲಿಸಂನಲ್ಲಿ ಸ್ನಾತಕೋತ್ತರ ಪದವಿ ಮತ್ತು ಇಂಗ್ಲಿಷ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಪತ್ರಿಕೋದ್ಯಮ, ಮನೋವಿಜ್ಞಾನ ಮತ್ತು ಇಂಗ್ಲಿಷ್ ವಿಷಯಗಳಲ್ಲಿ ತಮ್ಮ ಪದವಿ ಅಧ್ಯಯನವನ್ನು ಆಳ್ವಾಸ್ ಶಿಕ್ಷಣ ಸಂಸ್ಥೆಯಲ್ಲಿ ಮಾಡುತ್ತಿದ್ದ ಸಂದರ್ಭದಲ್ಲೇ ಮಂಗಳೂರು ವಿಶ್ವವಿದ್ಯಾನಿಲಯವನ್ನು ಪ್ರತಿನಿಧಿಸಿ ಸತತ ಮೂರು ವರ್ಷಗಳ ಕಾಲ ದಕ್ಷಿಣ ಭಾರತ ಮಟ್ಟದ ಯೂತ್ ಫೆಸ್ಟಿವಲ್ ನಲ್ಲಿ ನೃತ್ಯ, ನಾಟಕ ಮತ್ತು ಗಾಯನ ವಿಭಾಗಗಳಲ್ಲಿ ಭಾಗವಹಿಸಿ ಹಲವು ಬಹುಮಾನಗಳನ್ನು ಗೆದ್ದಿದ್ದಾರೆ. “ಬೆಳೆಯುವ ಸಿರಿ ಮೊಳಕೆಯಲ್ಲಿ” ಅನ್ನೋ ಮಾತು ಸುಳ್ಳಲ್ಲ ಅನ್ನೋದನ್ನು ಸಾಕ್ಷಿ ಸಮೇತ ಸಾಬೀತು ಪಡಿಸಿದ್ದಾರೆ.
ಇವೆಲ್ಲ ಸಾಧನೆಗಳಿಗೆ ಬೆನ್ನೆಲುಬಾಗಿರೋದು ಅವರ ಸದೃಢವಾದ ಬಾಲ್ಯ ಮತ್ತು ಕುಟುಂಬ.
ಖ್ಯಾತ ಯಕ್ಷಗಾನ ಕಲಾವಿದ ಮತ್ತು ಕಾದಂಬರಿಕಾರರಾದ ಶ್ರೀಧರ ಡಿ.ಎಸ್ ಹಾಗೂ ನಟೇಶ್ವರಿ ಡಿ.ಎಸ್. ಅವರ ಪುತ್ರಿ ಶ್ರೀಕಲಾ ಡಿ.ಎಸ್. ಮಾಧ್ಯಮ ಕ್ಷೇತ್ರದಲ್ಲಿ ಬಹಳ ವರ್ಷಗಳಿಂದ ಹಲವಾರು ವಿಭಾಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ, ಕ್ರಿಯೇಟಿವ್ ಡೈರೆಕ್ಟರ್ ಆಗಿರುವ ವಿನಾಯಕ ರಾಮ ಹೆಗ್ಡೆ ಅವರ ಧರ್ಮಪತ್ನಿ. ಸಾರ್ಥಕ್ ವಿ. ಹೆಗ್ಡೆ ಮತ್ತು ಸಂಪನ್ನ ವಿ. ಹೆಗ್ಡೆ ಅನ್ನೋ ಮುದ್ದು ಮಕ್ಕಳ ಅಮ್ಮ. ಅವರು ಮಂಗಳೂರು ಸಮೀಪದ ತಾಳಿಪಾಡಿ ಪ್ರದೇಶದಲ್ಲಿ ತಮ್ಮ ಬಾಲ್ಯವನ್ನು ಕಳೆದಿದ್ದಾರೆ. ಅವರ ಮೂಲ ಊರು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ತಾಳಗುಪ್ಪ. ಪ್ರಸ್ತುತ ಬೆಂಗಳೂರಿನಲ್ಲಿ ನೆಲೆಸಿದ್ದಾರೆ. ಕನ್ನಡ ಸಿನೆಮಾ-ದೂರದರ್ಶನ ಕ್ಷೇತ್ರದಲ್ಲಿ ಪ್ರಸಿದ್ಧ ಸ್ಕ್ರಿಪ್ಟ್ ರೈಟರ್ ಮತ್ತು ಪ್ರೊಡ್ಯೂಸರ್ ಆಗಿರುವ ಶ್ರೀನಿಧಿ ಡಿ.ಎಸ್. ಅವರ ಸಹೋದರಿ. ಶ್ರೀಕಲಾ ಅವರ ವೈಯಕ್ತಿಕ ಹಿನ್ನೆಲೆಯು ಒಬ್ಬ ಹೆಣ್ಣುಮಗಳಾಗಿ ತನ್ನ ಕುಟುಂಬದಲ್ಲಿ ಎಷ್ಟೆಲ್ಲಾ ಜವಾಬ್ದಾರಿಗಳನ್ನ ನಿಭಾಯಿಸಬೇಕಾಗುತ್ತದೆ ಎನ್ನುವುದರ ಒಂದು ಕಿರು ನೋಟ ಅಷ್ಟೇ. ಸಾಮಾನ್ಯರ ಹಾಗೆ ಅವರೂ ಕೂಡ ತಮ್ಮ ವೈಯಕ್ತಿಕ ಬದುಕಿನ ಜಂಜಡಗಳಲ್ಲೇ ಕಳೆದು ಹೋಗಿದ್ದರೆ ವಿಶೇಷ ಅನ್ನಿಸುತ್ತಿರಲಿಲ್ಲ. ಇದೆಲ್ಲವನ್ನೂ ಸಮರ್ಥವಾಗಿ ನಿಭಾಯಿಸುತ್ತ ಏನೆಲ್ಲಾ ಸಾಧನೆಗಳನ್ನು ಮಾಡಬಹುದು ಎನ್ನುವುದನ್ನ ನಮ್ಮ ಮುಂದೆ ಕೆಲಸದ ಮೂಲಕ ನಿದರ್ಶನವಾಗಿಸಿರೋದು ಎಲ್ಲರಿಗೂ ಸ್ಪೂರ್ತಿದಾಯಕವಾದ ವಿಚಾರ.
ಇಂತಹ ಎಲ್ಲಾ ಸಾಧನೆಗಳನ್ನು ಪರಿಗಣಿಸಿ ಸಹಜವಾಗಿ ಪ್ರಶಸ್ತಿಗಳೂ ಒಲಿದು ಬಂದಿವೆ. ಲಿಟಲ್ ಎಕ್ಸ್ ಪ್ಲೋರರ್ಸ್ ಅಕಾಡೆಮಿ ‘ಅದ್ವಿತೀಯ ನಾರಿ-2026’ ಪ್ರಶಸ್ತಿ, ಹಿಂದೂ ಎಕನಾಮಿಕ್ ಫೋರಮ್ ‘ಮಹಿಳಾ ಸಾಧಕಿ’ ಪ್ರಶಸ್ತಿ, ‘ಸೇವಾ ಯೋಧ ರತ್ನ ರಾಜ್ಯ ಪ್ರಶಸ್ತಿ’ಗಳು ಅವರನ್ನು ಅರಸಿ ಬಂದಿವೆ.
ಒಬ್ಬ ಹೆಣ್ಣುಮಗಳು ತನ್ನ ಶಕ್ತಿಯನ್ನು ಉತ್ತಮ ಸಮಾಜ ನಿರ್ಮಾಣಕ್ಕೆ ಬಳಸುತ್ತಾ ತಾಯಿಯಾಗಿ, ಮಗಳಾಗಿ, ಮಡದಿಯಾಗಿ, ಸೊಸೆಯಾಗಿ, ಶಿಕ್ಷಕಿಯಾಗಿ ಏನೆಲ್ಲಾ ಮಾಡಬಹುದು ಎನ್ನುವುದಕ್ಕೆ ಇವರು ಉದಾಹರಣೆ. ಸಹಜವಾಗಿಯೇ ಹತ್ತು ಹಲವು ಎಡರು ತೊಡರುಗಳು ಅವರಿಗೂ ಎದುರಾಗಿರುತ್ತವೆ. ಆದರೆ ಅವೆಲ್ಲವುಗಳನ್ನು ನಿಭಾಯಿಸುವ ಕಲೆ, ಕಲಿಯುವ ಧೈರ್ಯ ಅವರನ್ನು ಸಾಧಕರ ಸ್ಥಾನಕ್ಕೆ ಕರೆದುಕೊಂಡು ಹೋಗುತ್ತದೆ. ಆದ್ದರಿಂದ ಶ್ರೀಮತಿ ಶ್ರೀಕಲಾ ಡಿ.ಎಸ್. ಅವರ ಉತ್ತಮ ಕೆಲಸಗಳು ನಮಗೂ ಮಾದರಿಯಾಗಲಿ. ನಮ್ಮೊಳಗೂ ಹೊಸ ಚೈತನ್ಯ ತುಂಬಲಿ. ಅವರಿಗೂ ಇನ್ನಷ್ಟು ಮತ್ತಷ್ಟು ಸಾಧನೆ ಮಾಡುವ ಹುರುಪು ಹೀಗೆ ಸದಾ ಜೀವಂತವಾಗಿರಲಿ ಎಂದು ಹಾರೈಸೋಣ
ಇನ್ನೂ ಓದಿ : –https://kapublic.com/ai-bhagavadgeethe-book-nagarajvaidya/
ಲಿಂಕ್: – https://veeralokabooks.com/book/shh-shh-sumniri-idu-ammandarige

I am a teacher, blogger, and storyteller who shares creative and informative content for readers. i write on the storytelling platform Pratilipi and is the author of the Kannada book ಶ್…ಶ್.. ಸುಮ್ನಿರಿ ಇದು ಅಮ್ಮಂದಿರಿಗೆ. Along with teaching, i enjoys story writing and Mandala art, using creativity to inspire and connect with people through my work.