Telegram Join My Telegram WhatsApp Join My WhatsApp

ಪ್ರೇಮ್‌ ಕಾವ್ಯ ಯಾಕಿಷ್ಟು ಸದ್ದು ಮಾಡ್ತಿದೆ?

ಪ್ರೇಮ್‌ ಕಾವ್ಯ ಯಾಕಿಷ್ಟು ಸದ್ದು ಮಾಡ್ತಿದೆ? ಗೊತ್ತಾ?

ದಶಕಗಳಿಂದಲೂ ಮಾಧ್ಯಮಗಳು,ರಂಗಭೂಮಿ,ಚಲನಚಿತ್ರಗಳು,ಸಾಹಿತ್ಯಲೋಕ ಎಲ್ಲವೂ ಕೂಡ ಬೆಳೆದು ಬಂದಿರೋದು ಜನರ ಬೆಂಬಲದಿಂದ. ಜನರ ಮನಸ್ಥಿತಿಯೇ ಸಾಹಿತ್ಯಗಳ,ನಾಟಕ,ಕಲೆಗಳ ಜೀವಾಳ. ಮಾಧ್ಯಮ ಲೋಕ ಒಂದು ಸಮೂಹ,ಸಮಾಜದ ಮನಸ್ಥಿತಿಯನ್ನ ಪ್ರತಿಬಿಂಬಿಸುತ್ತಾ ಮುನ್ನಡೆಯುತ್ತಾ ಬಂದಿದೆ. ಈಗ ಎಲ್ಲೆಡೆ ವಿವಾದಕ್ಕೆ ಒಳಗಾಗಿರುವ ಪ್ರೇಮ್‌ ಅವರ ಸಾಹಿತ್ಯವೂ ಕೂಡ ನಮ್ಮ ನಿಮ್ಮೆಲ್ಲರ ನಡುವಿನ ಮನಸ್ಥಿತಿಯನ್ನ ಗಟ್ಟಿಗುಂಡಿಗೆಯಲ್ಲಿ ಪ್ರಸ್ತುತ ಪಡಿಸಿ ವಿವಾದಕ್ಕೆ ಒಳಗಾಗಿದೆ. ಒಂದೊಂದು ಸಿನಿಮಾದಲ್ಲಿ ಒಂದೊಂದು ಹಾಡಿನ ಮೂಲಕ ಸದ್ದು ಮಾಡಿದ್ದ ಪ್ರೇಮ್‌ ಇದೀಗ ‘ಕೆಡಿ’ ಚಿತ್ರದಲ್ಲಿ ಈ ಹಾಡಿನ ಮೂಲಕ ಜನರನ್ನ ತಲುಪುವ ಪ್ರಯತ್ನ ಮಾಡಿದ್ದಾರೆ. ಇಲ್ಲಿ ಹಾಡಿನಿಂದ ನಡೆಯಬೇಕಾಗಿದ್ದ ಸೆನ್ಸೇಷನ್‌ ಆಗಿ ಜನ ನೋಡಿದ್ದಷ್ಟೇ ಇಲ್ಲಿ ತಂತ್ರಜ್ಞಾನಗಳು ಲೆಕ್ಕಕ್ಕೆ ಇಟ್ಟುಕೊಳ್ಳುತ್ತೆ ಅನ್ನೋದು ಗಮನಾರ್ಹ.

ಸಭ್ಯ ಮತ್ತು ಅಸಭ್ಯ ಅನ್ನೋ ಶಬ್ಧಕ್ಕೆ ಒಂದೇ ಅಕ್ಷರ ವ್ಯತ್ಯಾಸ ಇರೋ ಹಾಗೆ ಅದರ ನಡುವಿನ ಗೆರೆ ಅಷ್ಟು ತೆಳುವಾಗಿದೆ. ಅದು ಗಮನದಲ್ಲಿರಬೇಕು. ಪ್ರೇಮ್‌ ಅವರ ಸಾಹಿತ್ಯವನ್ನ ವಿರೋಧಿಸಿದ್ದು ಒಂದು ಲೆಕ್ಕದಲ್ಲಿ ಮುಂದಿನ ಪೀಳಿಗೆಯ ಬರಹಗಾರರಿಗೆ ಯಾವ ರೀತಿಯ ಬರಹಗಳನ್ನ ಜನಕ್ಕೆ ತಲುಪಿಸಬೇಕು ಅನ್ನೋದಕ್ಕೆ ನಿದರ್ಶನ. ಮಡಿವಂತರದ್ದು ಒಂದು ಪಂಗಡವಾದರೆ ಎಲ್ಲವನ್ನೂ ಮೀರಿದ ಪೀಳಿಗೆಯೊಂದು ಬೆಳೆಯುತ್ತಿರೋ ಕಲ್ಪನೆಗೆ ಇದೊಂದು ಸಾಕ್ಷಿ. ಯಾರನ್ನ ,ಯಾವ ರೀತಿಯ ಸಾಹಿತ್ಯವನ್ನ ಬೆಳೆಸಬೇಕು ಅಂತ ನಿರ್ಧರಿಸೋದು ಅಭಿಮಾನಿ ದೇವರುಗಳು. ಅಭಿಮಾನಿಗಳೇ ಜೀವಾಳ ಆಗಿರೋದರಿಂದ ಉತ್ತಮ ಬೆಂಬಲವನ್ನ ,ಉತ್ತಮ ಸಾಹಿತ್ಯಗಳಿಗೆ ನೀಡಿದರೆ ಉತ್ತಮ ಸಿನಿಮಾಗಳನ್ನ ನಮ್ಮ ಕನ್ನಡ ಚಲನಚಿತ್ರರಂಗ ಕೊಡಬಲ್ಲದು.  ಮಡಿ ಮಡಿ ಮಡಿಯೆಂದು ಅಡಿಗಡಿಗ್ ಹಾರುತಿ ಅಂತ  ಪ್ರೇಮ್‌ ಅವರ ಮೇಲೆ ಹಾರಿ ಹಾರಿ ಬೀಳೋದಕ್ಕಿಂತ ನಮ್ಮ ಸಾಹಿತ್ಯ ಪರಂಪರೆಯನ್ನ ಬೆಳೆಸಬೇಕಾದ ನಾವು ಯಾರಿಗೆ ಹೆಚ್ಚು ಒತ್ತು ಕೊಡಬೇಕು. ಯಾವ ರೀತಿಯ ಬರಹಗಳನ್ನ , ಸಿನಿಮಾಗಳನ್ನ ,ಹಾಡುಗಳನ್ನ ಕೇಳಬೇಕು,ಟ್ರೋಲ್‌ ಮಾಡಬೇಕು ಅನ್ನೋದು ಎಲ್ಲರೂ ಹುಶಾರಾಗಿ ನಿಭಾಯಿಸೋದಕ್ಕೆ ಇದೊಂದು ಎಚ್ಚರಿಕೆ.

ಇಂದು AI ಯುಗದಲ್ಲಿ ಅದು ಎಷ್ಟು ಜನ ಈ ಹಾಡನ್ನ ಕೇಳಿದ್ದಾರೆ ಅನ್ನೋದನ್ನಷ್ಟೇ ಲೆಕ್ಕ ಇಡುತ್ತೆ ಆದ್ದರಿಂದ ಯಾವ ರೀತಿಯ ವಿಷಯವನ್ನ ನಾವು ನೋಡುತ್ತಾ ಇದ್ದೇವೆ ಅನ್ನೋದನ್ನ ಪ್ರೇಮ್‌ ಅವರು ಕನ್ನಡಿಯಲ್ಲಿ ತೋರಿಸಿದ್ದಾರೆ ಅಷ್ಟೇ! ಇಲ್ಲಿಯವರೆಗೂ ಏನೇ ಕಾಂಟ್ರವರ್ಸಿಯಾದರೂ.. ಹಾಡುಗಳಲ್ಲಿ ಪ್ರೇಮ್ ಬದಲಾವಣೆ ಮಾಡಿಕೊಂಡಿಲ್ಲ. ಆದರೆ, ಪ್ರೇಮ್ ಈ ಸಲ ಏನು ಮಾಡ್ತಾರೋ.. ಕಾದುನೋಡಬೇಕು. ಅರಗಿಸಿಕೊಳ್ಳೋಕೆ ಕೊಂಚ ಕಷ್ಟ ಅಂದರೂ.. ಪ್ರೇಮ್‌ ಚಿತ್ರಗಳಲ್ಲಿರುವ ಹಾಡುಗಳೆಲ್ಲವೂ ಹಿಟ್ ಆಗಿವೆ. ‘ಸೆರ್ಗ ಸರ್ಸೆ’ ಹಾಡಿನ ಬಗ್ಗೆ ಜನ ಬೈಯ್ಯುತ್ತಿದ್ದರೂ .. ರಿಲೀಸ್ ಆದ ಕೇವಲ ಮೂರು ದಿನಗಳಲ್ಲಿ 70 ಲಕ್ಷಕ್ಕೂ ಅಧಿಕ ವ್ಯೂಸ್ ಪಡೆದುಕೊಂಡಿದೆ. ಅಲ್ಲಿಗೆ ಸಾಂಗ್ ಅಂತೂ ಹಿಟ್ ಆಗಿದೆ. ಹಾಗಾದ್ರೆ, ಹಿಟ್ ಆಗುವುದಕ್ಕಾಗಿ ಏನ್‌ ಮಾಡಿದ್ರೂ ಸರಿನಾ? ದುಡ್ಡಿಗಾಗಿ ಏನ್‌ ಬೇಕಿದ್ರೂ ಮಾಡಬಹುದು ಅನ್ನೋ ಸಂದೇಶ ಕೂಡ ಯುವ ಜನತೆಗೆ ಪ್ರೇಮ್‌ ಅವರು ಕೊಟ್ಟ ಹಾಗಾಗುತ್ತೆ. “ಎದೆ ಬಡಿತ ಜೋರಾಗಿದೆ………” ಅನ್ನೋ ಹಾಡಿನ ದನಿ ಕೇಳ್ತಾ ಇದ್ದ ಹಾಗೇ ನಿಜವಾಗ್ಲೂ ಎದೆಯಲ್ಲಿ  ಒಂದು ಮಧುರವಾದ ಮಿಡಿತ ಏಳೋದು ನಿಜ ಹೀಗಿರೋವಾಗ ಉತ್ತಮ ಯುವಜನತೆಯನ್ನ ಬೆಳೆಸೋದು ಪ್ರೇಮ್‌ ಅವರ ಹಾಗೂ ಎಲ್ಲಾ ಚಿತ್ರರಂಗದವರ ಜವಾಬ್ದಾರಿ ಅನ್ನೋದು ಸತ್ಯ.

ಇಂದು ಆರನೇ ತರಗತಿ ಮಗು ಹತ್ತಿರ ಹೋಗಿ ಕೇಳಿದರೂ ಯಾವ ರೀತಿಯ ವಿಷಯದ ಬಗ್ಗೆ ವಿಡಿಯೋ ಮಾಡಿದರೆ ಹೆಚ್ಚು ಜನ ನೋಡುತ್ತಾರೆ ಅಂತ ಕೇಳಿದ್ರೆ ಅದು ಹೇಳೋ topic ಗಳು ನಮ್ಮ ತಲೆ ಸುತ್ತುವಂತೆ ಮಾಡುತ್ತೆ.ಅಂದರೆ ನಾವು ಯಾವ ರೀತಿಯ ಪ್ರಪಂಚವನ್ನ ಕಟ್ಟುತ್ತಾ ಇದ್ದೇವೆ ಅಲ್ವಾ?

ಮಗು ಅಮ್ಮ, “ಅಡಗೂಲಜ್ಜಿ ತರ ಡ್ರೆಸ್‌ ಹಾಕ್ಕೋಳ್ಳಬೇಡ, ಮಾಡರ್ನ್‌ ಆಗಿರು” ಅಂತ ಹೇಳ್ತಿದೆ ಅಂದ್ರೆ ಆ ಮಗುಗೆ ಯಾವುದಕ್ಕೆ ತನ್ನ ಸುತ್ತಲಿನ ಜನ ಬೆಂಬಲ ಕೊಡುತ್ತಿದ್ದಾರೆ ಅನ್ನೋದು ಗಮನಕ್ಕೆ ಬರುತ್ತಿದೆ ಅಂತ. ಹಾಗಿರೋವಾಗ ವಿವಾದಾತ್ಮಕ ಸಾಹಿತ್ಯ ರಚನೆ ಮಾಡಿದ್ದು ಒಪ್ಪತಕ್ಕ ವಿಷಯ ಅಲ್ಲದೇ ಇದ್ದರೂ ಕೂಡ ಅಭಿಮಾನಿಗಳು , ಪ್ರೇಕ್ಷಕರು ಆದ ನಾವೇ ಎಡವುತ್ತಿದ್ದೇವೆ ಅಂತ ಲೆಕ್ಕ. ಅಭಿಮಾನಿಗಳು ಯಾವ ರೀತಿಯ ಚಿತ್ರಕ್ಕೆ ಹೇಗೆ ಪ್ರತಿಕ್ರಿಯಿಸುತ್ತಾರೆ ಅನ್ನೋದನ್ನ ನೋಡಿಕೊಂಡೇ ಎಲ್ಲಾ ಚಿತ್ರಗಳು ನಿರ್ಮಾಣ ಆಗೋದು ಅದೇ ನಂಬಿಕೆಯ ಮೇಲೆ ಕೋಟಿ ಕೋಟಿ ಬಂಡವಾಳ ಹೂಡೋದು. ಆದ್ದರಿಂದ ನಾವು ಎಚ್ಚೆತ್ತುಕೊಂಡಿದ್ದು ಸರಿಯಾಗಿಯೇ ಇದೆ. ಇನ್ನೂ ಈ ಸೂಕ್ಷ್ಮತೆಯನ್ನ ಅರಿತುಕೊಂಡು ಒಳ್ಳೆಯ ಮೌಲ್ಯಾಧಾರಿತ ಚಿತ್ರಗಳಿಗೆ , ಸಾಹಿತ್ಯಗಳಿಗೆ ನಮ್ಮ ಬೆಂಬಲವನ್ನ ಕೊಡೋಣ.

ಧಾರವಾಹಿಗಳನ್ನ ಮಾಡುವವರನ್ನ ಬಯ್ಯುತ್ತ ಬಯ್ಯುತ್ತ ಮೂರು ಹೊತ್ತು ಧಾರವಾಹಿಯ ಪಾತ್ರಗಳಲ್ಲೇ ಜನ ಮುಳುಗಿ ಹೋಗ್ತಾ ಇದ್ದಾರೆ. ಧಾರವಾಹಿಗಳು , ಚಲನಚಿತ್ರಗಳು ಕೇವಲ ಕಲ್ಪನೆಯಲ್ಲ ನಮ್ಮ ಸುತ್ತಲಿನಲ್ಲಿ ನಡೆಯುವ ವಿಚಾರಗಳೇ ಕನ್ನಡಿಯಲ್ಲಿ ನೋಡಿದಂತೆ ಎದುರು ಕಾಣಿಸುತ್ತಾ ಇರೋದು ಆದ್ದರಿಂದ ಒಳ್ಳೆಯ ಸಿನಿಮಾಗಳು ತೆರೆಗೆ ಬರಬೇಕು ಅಂತಾದರೆ ನಾವು ಉತ್ತಮ ಸಮಾಜದ ಚಿತ್ರಣವನ್ನ ಒಬ್ಬ ನಿರ್ದೇಶಕನಿಗೆ ತಲುಪಿಸಬೇಕಿದೆ, ಉತ್ತಮ ಕತೆಗಳನ್ನ ಗೆಲ್ಲಿಸಬೇಕಿದೆ. ಹಾಗೇ ತನ್ನನ್ನು ತಾನು ಗೆಲ್ಲಿಸಿಕೊಳ್ಳೋಕೆ ಯಾವ ಮಾರ್ಗವನ್ನಾದರೂ ಆರಿಸಿಕೊಳ್ಳಬಹುದು ಅಂದುಕೊಳ್ಳುವವರಿಗೆ ಇದೊಂದು ಎಚ್ಚರಿಕೆ.

ಈ ರೀತಿಯ ಸಾಹಿತ್ಯದ ಶೈಲಿಗಳಿಗೆ ಹೆಚ್ಚು ಬೇಡಿಕೆಯಿದೆ. ಗೂಗಲ್‌ ವ್ಯೂವ್ಸ್‌ ಗಳಷ್ಟೇ ಗಣನೆಗೆ ಬರೋದು ಎಲ್ಲಾ ರೀತಿಯ ಸೋಷಿಯಲ್‌ ಮಿಡಿಯಾ ಕಂಟೆಂಟ್ ಗಳ ವಿಷಾದಕರ ಬೆಳವಣಿಗೆಗೆ ದಾರಿ ಆಗಿರೋದಂತೂ ಸತ್ಯ ಏನ್‌ ಮಾಡೋದು ಒಳ್ಳೆ ರೀಲ್‌ ಮಾಡಿದ್ರೇ ನೋಡಲ್ಲ ಅಂತ ಜನ ಏನು ನೋಡುತ್ತಾರೋ ಅದನ್ನೇ ತಲುಪಿಸೋಣ ಅನ್ನುವ ಮನಸ್ಥಿತಿ ಕೂಡ ಬೆಳೆಯುತ್ತಿರೋದಕ್ಕೂ ಈ ಒಂದು ಹಾಡು ಉದಾಹರಣೆ ಆಗಿ ನಿಲ್ಲುತ್ತೆ. ಇಡೀ ಸಮಾಜದ ಆತಂಕಕಾರಿ ಬೆಳವಣಿಗೆ ಈ ಹಾಡಿನ ಮೂಲಕ ಹೊರಬಂದಿದೆ!

ವಿವಾದಗಳು,  ವಿಶ್ಲೇಷಣೆಗಳು ಹಾಡನ್ನು ಮತ್ತಷ್ಟು ಜನರನ್ನ ತಲುಪೋಕೆ ಸಹಾಯ ಆಯ್ತು. ಪ್ರಚಾರ ಬೇಕಿತ್ತು ಪ್ರಚಾರವನ್ನ ಭರ್ಜರಿಯಾಗಿಯೇ ಮಾಡಿದ್ದೀವಿ. ಎಲ್ಲಾ ವಾದ ವಿವಾದಗಳ ನಡುವೆ ಯಾವ ಹಾಡಿಗೆ ಸ್ಟೆಪ್‌ ಹಾಕಿ ಸಂಭ್ರಮಿಸಬೇಕು ಅನ್ನೋದನ್ನ ನೆನಪಿಟ್ಕೊಳೋಣ.

ಪ್ರೇಮ್‌ ಅವರ ಒಂದು ಸಂದರ್ಶನದಲ್ಲಿ ಹೇಳ್ತಾ ಇದ್ದಾರೆ ಪುಟ್‌ ಪುಟ್ಟ ಮಕ್ಕಳೆಲ್ಲಾ ತನ್ನ ಹಾಡಿಗೆ ಡ್ಯಾನ್ಸ ಮಾಡ್ತಾ ಇರೋದು ಖುಷಿ ಆಗುತ್ತೆ ಅಂತ ಅಂದರೆ ಅವರ ಮೇಲಿನ ಅಭಿಮಾನವನ್ನ ಅವರು ಸಮಾಜದ ಉತ್ತಮ ಬೆಳವಣಿಗೆಗೆ ಬಳಸಿಕೊಳ್ಳುವ ಅವಕಾಶವಿದೆ ಆದ್ದರಿಂದ ಕೇವಲ ಕರ್ಮಶಿಯಲ್‌ ಆಗದೇ ಉತ್ತಮ ಹಾಡುಗಳು ನಮಗೆ ಸಿಕ್ಕಲಿ ಅವರಿಂದ ಅಂತ ಆಶಿಸೋಣ. ಉತ್ತಮ ಕಲಾವಿದರನ್ನ, ಉತ್ತಮ ನಿರ್ದೇಶಕರನ್ನ ಎಲ್ಲರನ್ನ ಉತ್ತಮವಾಗಿರಿಸಿಕೊಳ್ಳೋ ದೊಡ್ಡ ಜವಬ್ದಾರಿ ಪ್ರೇಕ್ಷಕ, ಅಭಿಮಾನಿ ದೇವರ ಕೈಯಲ್ಲೇ ಇದೆ. ಜನಕ್ಕೆ ಯಾವ ಪ್ರಾಡಕ್ಟ್‌ ಬೇಕೋ ಅದನ್ನೇ ಮಾರಾಟಗಾರ ಅಂಗಡಿಯಲ್ಲಿಡೋದು?! ಗ್ರಾಹಕರು ಯಾವುದನ್ನ ತೆಗೆದುಕೊಳ್ಳಬೇಕು ಬೇಡ ಅನ್ನೋದನ್ನ ಜವಾಬ್ದಾರಿಯುತವಾಗಿ ನಿರ್ಧರಿಸುತ್ತಾರೆ ಅನ್ನೋದು ಗಮನಾರ್ಹ ಸಂಗತಿಯಾಗಲಿ. ಜವಾಬ್ದಾರಿ ಒಬ್ಬರ ಮೇಲಲ್ಲ ಎಲ್ಲರ ಮೇಲಿದೆ!?!

ಇನ್ನೂ ಓದಿ : – https://kapublic.com/sakala-sanskruti-sanstheya-sansthapakiya-parichaya/

ಲಿಂಕ್‌ ಗಳು :- http://amazon.in